ಕೈಗಾರಿಕಾ ಕಾರ್ಮಿಕರು, ವಿಶ್ವದ

20ನೆಯ ಶತಮಾನದ ಆದಿ ಭಾಗದಲ್ಲಿ ಸ್ಥಾಪಿತವಾದ ಒಂದು ಕ್ರಾಂತಿಕಾರಿ ಕಾರ್ಮಿಕ ಸಂಘ.ಐಡಬ್ಲ್ಯು.ಡಬ್ಲ್ಯು. ಅಥವಾ ವಾಬ್ಲೀಸ್ ಎಂಬುದು ಇದರ ಜನಪ್ರಿಯ ಸಂಬೋಧನೆ. ಇಲಿನಾಯ್‍ನ ಷಿಕಾಗೋದಲ್ಲಿ ಸ್ಥಾಪಿತವಾಯಿತು(1905). ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಸಂಘ ಸ್ಥಾಪಿತವಾದ ಕಾಲದಲ್ಲಿ ಅಮೆರಿಕದ ಕಾರ್ಮಿಕ ಮುಂದಾಳುಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಹಲವು ಉಗ್ರಗಾಮಿ ಕಾರ್ಮಿಕ ಮುಂದಾಳುಗಳು ರಾಜಕೀಯ ಹಾಗೂ ಕಾರ್ಮಿಕ ಸಂಘ ಚಟುವಟಿಕೆಗಳಲ್ಲಿ ಸ್ವಚ್ಛಂದವಾಗಿ ಭಾಗವಹಿಸಲು ಆಸಕ್ತರಾಗಿದ್ದು ಕೈಗಾರಿಕಾನುಗುಣ ಕಾರ್ಮಿಕ ಸಂಘಗಳನ್ನು (ಇಂಡಸ್ಟ್ರಿಯಲ್ ಯೂನಿಯನ್ಸ್) ಸ್ಥಾಪಿಸಲು ವಾದಿಸಿದರೆ, ಮತ್ತೆ ಕೆಲವು ಮಂದಗಾಮಿ ಕಾರ್ಮಿಕ ಮುಂದಾಳುಗಳು, ಅದರಲ್ಲೂ ಅಮೆರಿಕನ್ ಕಾರ್ಮಿಕ ಮಹಾಕೂಟಕ್ಕೆ (ಅಮೆರಿಕನ್ ಫೆಡರೇಷನ್ ಆಫ್ ಲೇಬರ್) ಸೇರಿದವರು ಕಸಬಿಗೆ ಅನುಗುಣವಾದ ಕಾರ್ಮಿಕ ಸಂಘಗಳ (ಕ್ರಾಫ್ಟ್ಸ್ ಯೂನಿಯನ್ಸ್) ಸ್ಥಾಪನೆಯಾಗಬೇಕೆಂದು ವಾದಿಸಿದರು. ಉಗ್ರಗಾಮಿ ಕಾರ್ಮಿಕರ ಪ್ರಕಾರ ಕೈಗಾರಿಕಾನುಗುಣ ಕಾರ್ಮಿಕ ಸಂಘಗಳು ಉದ್ಯಮಿಗಳ ಶಕ್ತಿಗೆ ಸಮನಾಗಿ ಬಲಗಳಿಸಿ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮಾಲೀಕರಮೇಲೆ ಪರಿಣಾಮಕಾರಿಯಾಗಿ ಒತ್ತಡ ಹೇರಬಲ್ಲುವೆಂದೂ ಆದರೆ ಕಸಬಿಗೆ ಅನುಗುಣವಾದ ಕಾರ್ಮಿಕ ಸಂಘಗಳು ಅಷ್ಟು ಬಲಿಷ್ಠವಾಗಿ ಸಂಘಟಿತವಾಗಿರದೆ, ಅವು ನಡೆಸುವ ಮುಷ್ಕರಗಳು ಜಯಪ್ರದವಾಗುವುದಿಲ್ಲವೆಂದೂ ವಾದಿಸಿದರು. ಅಷ್ಟೇ ಅಲ್ಲದೆ, ಅಕುಶಲ ಕಾರ್ಮಿಕರು ಕಸಬಿನ ಸಂಘಗಳ ಸದಸ್ಯರಾಗಲು ಅವಕಾಶವಿಲ್ಲದಿರುವುದರಿಂದ ಅವರಿಂದ ಆ ಸಂಘಗಳಿಗೆ ಬೆಂಬಲವಾಗಲಿ ಅವರಿಗೆ ಆ ಸಂಘಗಳಿಂದ ಸಹಾಯವಾಗಲಿ ದೊರಕುವುದಿಲ್ಲವೆಂದೂ ವಾದಿಸಿದರು. ಈ ವಾದಸರಣಿಯನ್ನು ಅಮೆರಿಕನ್ ಕಾರ್ಮಿಕ ಮಹಾಕೂಟಕ್ಕೆ ಸೇರಿದ ಮಂದಗಾಮಿ ಕಾರ್ಮಿಕರು ಕಟುವಾಗಿ ವಿರೋಧಿಸುತ್ತ ಕಸಬಿಗೆ ಅನುಗುಣವಾದ ಕಾರ್ಮಿಕ ಸಂಘಗಳ ಮುಷ್ಕರಗಳೇ ಹೆಚ್ಚು ಜಯಪ್ರದವಾಗುತ್ತವೆಂದು ವಾದಿಸಿದರು.

ಮೇಲೆ ಹೇಳಿದ ವಾದಪ್ರತಿವಾದಗಳನ್ನು ಬಗೆಹರಿಸಿ ಕಾರ್ಮಿಕ ಸಂಘಗಳ ಬೆಳೆವಣಿಗೆಯನ್ನು ಚುರುಕುಗೊಳಿಸುವುದಕ್ಕಾಗಿ 1905ರ ಜೂನ್ ತಿಂಗಳಲ್ಲಿ ಕಾರ್ಮಿಕ ಹಾಗೂ ಸಮತಾವಾದಿಗಳ ಸಮ್ಮೇಳನವೊಂದನ್ನು ಕರೆಯಲಾಯಿತು. ಈ ಸಮ್ಮೇಳನ ಹನ್ನೆರಡು ದಿನಗಳ ಕಾಲ ನಡೆದು ಇದರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಅನೇಕ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ರೆವರೆಂಡ್ ಹೆಗರ್ಟಿಯ ಯೋಜನೆಯೊಂದು ಅನುಮೋದಿತವಾಗಿ, ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಕೂಟ ಅಸ್ತಿತ್ವಕ್ಕೆ ಬಂತು. ಈ ಯೋಜನೆಯ ಪ್ರಕಾರ ಪ್ರತಿಯೊಂದು ಉದ್ಯಮದ ಕಾರ್ಮಿಕರೆಲ್ಲರನ್ನೂ ಈ ಸಂಘದ ಸದಸ್ಯರನ್ನಾಗಿ ಸ್ವೀಕರಿಸಲಾಯಿತು. ಅಂದರೆ ಕಸಬಿಗೆ ಅನುಗುಣವಾದ ಕಾರ್ಮಿಕ ಸಂಘಗಳಿಗೆ ಅವಕಾಶ ಕೊಡಲಿಲ್ಲವೆಂದಾಯಿತು. ಹೀಗೆ ಪ್ರಾರಂಭವಾದ ಈ ಮಹಾಸಂಸ್ಥೆಯನ್ನು ಹದಿಮೂರು ಕೈಗಾರಿಕಾ ಭಾಗಗಳನ್ನಾಗಿ ವಿಂಗಡಿಸಲಾಯಿತು. ಒಂದೇ ಕೈಗಾರಿಕೆಗೆ ಸೇರಿದ ಪ್ರತಿಯೊಂದು ಪಟ್ಟಣದ ಕಾರ್ಮಿಕರೆಲ್ಲರೂ ಸೇರಿ ಒಂದು ಸ್ಥಳೀಯ ಕೈಗಾರಿಕಾಕಾರ್ಮಿಕ ಸಂಘವನ್ನು ಸ್ಥಾಪಿಸಿದರು. ಸ್ಥಳೀಯ ಕೈಗಾರಿಕಾ ಕಾರ್ಮಿಕ ಸಂಘಗಳೆಲ್ಲವೂ ಒಟ್ಟು ಸೇರಿ ರಾಷ್ಟ್ರೀಯ ಕೈಗಾರಿಕಾ ಕಾರ್ಮಿಕರ ಮಹಾಕೂಟವಾಯಿತು. ರಾಷ್ಟ್ರೀಯ ಕೈಗಾರಿಕಾ ಕಾರ್ಮಿಕ ಕೂಟಗಳು ಸೇರಿ ಒಂದು ಇಲಾಖೆಯಾಗಿ ರೂಪುಗೊಂಡುವು. ಇಂಥ ಇಲಾಖೆಗಳು ಒಟ್ಟು ಸೇರಿ ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಸಂಸ್ಥೆಯಾಗಿ ಕೆಲಸ ಪ್ರಾರಂಭಿಸಿದುವು. ಈ ಸಂಸ್ಥೆಯ ಸದಸ್ಯರೆಲ್ಲರೂ ತಮ್ಮ ಉದ್ದೇಶಗಳನ್ನು ಅಲ್ಪಕಾಲದಲ್ಲಿ ಹಾಗೂ ಅತ್ಯಲ್ಪ ಶ್ರಮದ ವೆಚ್ಚದಿಂದ ಸಾಧಿಸುವುದಕ್ಕಾಗಿ ಎಲ್ಲ ವಿಧಾನಗಳನ್ನೂ ಅನುಸರಿಸಬಹುದಾಗಿತ್ತು. ಅತಿ ದೀರ್ಘಕಾಲದ ಮುಷ್ಕರಗಳು ಪರಿಣಾಮಕಾರಿಯಾದ ವಿಧಾನವಲ್ಲವೆಂದು ಭಾವಿಸಲಾಗಿತ್ತು. ಮುಷ್ಕರವೇನಾದರೂ ಜಯಪ್ರದವಾಗದಿದ್ದರೆ ಕಾರ್ಮಿಕರು ಕಾರ್ಖಾನೆಯಲ್ಲಿ ವಿಧ್ವಂಸಕ ಕಾರ್ಯಗಳನ್ನು ನಡೆಸುವುದಕ್ಕೂ ತಮ್ಮ ಬೇಡಿಕೆಗಳೆಲ್ಲವನ್ನು ಈಡೇರಿಸಿಕೊಡಬೇಕೆಂದು ಉದ್ಯೋಗದಾತರ ಮೇಲೆ ಒತ್ತಾಯ ಹಾಕುವುದಕ್ಕೂ ತಮ್ಮ ತಮ್ಮ ಕೆಲಸಗಳಿಗೆ ವಾಪಸ್ಸು ಹೋಗಬೇಕೆಂಬುದು ಈ ಸಂಸ್ಥೆಯ ವಾದವಾಗಿತ್ತು.

ಪ್ರಾರಂಭದಲ್ಲಿ ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಸಂಘ ತನ್ನ ಸಂಸ್ಥಾಪಕರ ಎಲ್ಲ ಉದ್ದೇಶಗಳನ್ನೂ ಪೂರೈಸಿತು. 1906ರಲ್ಲಿ ನಡೆದ ಈ ಸಂಸ್ಥೆಯ ಎರಡನೆಯ ವಿದ್ಯುಕ್ತ ಸಭೆಗೆ ಮುಂಚೆ ಇದರ ಸದಸ್ಯರುಗಳ ಸಂಖ್ಯೆ 1,00,000 ಇದು ತನ್ನದೇ ಆದ ಇಂಡಸ್ಟ್ರಿಯಲ್ ಯೂನಿಯನ್ ಬುಲೆಟಿನ್ ಎಂಬ ಸಾಪ್ತಾಹಿಕೆಯೊಂದನ್ನು ಪ್ರಕಟಿಸುತ್ತಿತ್ತು. ಆದರೆ ಈ ಮಹಾಸಂಘದಲ್ಲಿ ವಿಭಿನ್ನ ರಾಜಕೀಯ ಬಣಗಳಿಗೆ ಸೇರಿದ ಸದಸ್ಯರುಗಳಿದ್ದುದರಿಂದ ಅವರಲ್ಲಿ ಕಲಹ ತೀರ ಸಾಮಾನ್ಯವಾಗಿತ್ತು. ಆದ್ದರಿಂದ 1907ರಲ್ಲಿ ಪಶ್ಚಿಮ ಮಹಾಸಂಘ (ವೆಸ್ಟರ್ನ್ ಫೆಡರೇಷನ್) ಎಂಬ ಒಂದು ಕಾರ್ಮಿಕ ಅಂಗಸಂಸ್ಥೆ ಈ ಮಹಾಸಂಘದಿಂದ ಹೊರಬಂತು. ಇದೇ ರೀತಿ ಎರಡು ವರ್ಷಗಳಾದ ಮೇಲೆ ಸಿಂಡಿಕಲಿಸ್ಟ್ ಬಣವೂ ಹೊರಬಂತು. ಕೈಗಾರಿಕಾ ಕಾರ್ಮಿಕ ಸಂಘ ಎರಡು ಸಂಸ್ಥೆಗಳಾಗಿ ಒಡೆಯಿತು. ಅವುಗಳಲ್ಲಿ ಒಂದರ ಕೇಂದ್ರ ಮಿಷಿಗನ್ ರಾಜ್ಯದ ಡೆಟ್ರಾಯಿಟ್‍ನಲ್ಲೂ ಮತ್ತೊಂದರ ಕೇಂದ್ರ ಷಿಕಾಗೋದಲ್ಲೂ ಇತ್ತು. ಆದರೆ ಡೆಟ್ರಾಯಿಟ್‍ನ ಸಂಸ್ಥೆ ಬೇಗ ಅವಸಾನಗೊಂಡಿತು. ಈ ಕಾರಣಗಳಿಂದ ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಸಂಘದ ಸದಸ್ಯಬಲ ಬಹಳವಾಗಿ ಕುಗ್ಗಿತು. ಮೇಲಾಗಿ, ಹೊಸದಾಗಿ ಸೇರಿದ ಸದಸ್ಯರೂ ತಮ್ಮ ಚಂದಾಹಣವನ್ನು ಸಲೀಸಾಗಿ ಕೊಡುತ್ತಿರಲಿಲ್ಲವಾದ್ದರಿಂದ ಈ ಮಹಾಸಂಘದ ಹಣಕಾಸಿನ ಸ್ಥಿತಿ ಹದಗೆಟ್ಟಿತು.

ವಿಶ್ವ ಕಾರ್ಮಿಕ ಸಂಘ ನಡೆಸಿದ ಮುಷ್ಕರಗಳ ಪೈಕಿ 1912ರಲ್ಲಿ ನಡೆದ ಲಾರೆನ್ಸ್ ಮುಷ್ಕರ ಬಹಳ ಮುಖ್ಯವಾದ್ದು. ಈ ಕಾರಣದಿಂದಲೇ ಈ ಸಂಸ್ಥೆ ಬಹಳ ಪ್ರಸಿದ್ಧವಾಯಿತೆಂದು ಹೇಳಬಹುದು. ಸುಮಾರು 30,000 ಗಿರಣಿ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗವಹಿಸಿದ್ದರು. ಇಂಗ್ಲಿಷ್ ಭಾಷೆಯನ್ನು ಆಡದಿದ್ದ ಸಾವಿರಾರು ಮಂದಿ ಮೊಟ್ಟಮೊದಲಿಗೆ ಇದರಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಿದರು. ಸದಸ್ಯರು ಉಗ್ರವಾದಿಗಳಾಗಿದ್ದು ಕೊಲೆ, ಲೂಟಿ ಮುಂತಾದ ಕಾರ್ಯಗಳಲ್ಲಿ ನಿರತರಾಗಿದ್ದರು. ಆದ್ದರಿಂದಲೇ ಸುಮಾರು 5,000 ವಾಬ್ಲಿಗಳು ಸೆರೆಗೆ ಒಳಗಾದರು ಮತ್ತು ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಅನೇಕ ಕಡೆ ಈ ಸಂಘವನ್ನು ಮೂಲೋತ್ಪಾಟನ ಮಾಡಲು ಪ್ರಯತ್ನಗಳು ನಡೆದುವು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಈ ಕಾರ್ಮಿಕ ಸಂಸ್ಥೆಯೊಂದೇ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದು. ಇದು 1917ರಲ್ಲಿ ಜಾರಿಗೆ ಬಂದ ಗೂಢಚರ್ಯೆಯ ವಿರುದ್ಧ ಕಾನೂನಿನ ಕ್ರಮಕ್ಕೆ ಒಳಗಾಗಿತ್ತು. ಯುದ್ಧವಾದ ಮೇಲೆ ಈ ಸಂಘ ಹಾಗೂ ಕಮ್ಯೂನಿಸ್ಟ್ ಅಂತರರಾಷ್ಟ್ರೀಯ ನಡುವೆ ಘರ್ಷಣೆಯುಂಟಾಯಿತು. ಇದು ವಿಶ್ವಕಾರ್ಮಿಕ ಕೂಟದ ಬಲವನ್ನು ಬಹುವಾಗಿ ಕುಗ್ಗಿಸಿತು. ಈ ಸಂಸ್ಥೆಯನ್ನು ದಮನಮಾಡಲು ಅಮೆರಿಕದಲ್ಲಿ ಅನೇಕ ರಾಜ್ಯ ಸರ್ಕಾರಗಳು ಕೆಲವು ದಂಡಾರ್ಹ ಸಿಂಡಿಕಲಿಸಂ ಕಾನೂನುಗಳನ್ನು ಜಾರಿಗೆ ತಂದುವು. ಅಲ್ಲಿಯ ಪರಮೋಚ್ಛ ನ್ಯಾಯಾಲಯ ಇವನ್ನು ಎತ್ತಿ ಹಿಡಿಯಿತು. ಇದಲ್ಲದೆ 1918ರಲ್ಲಿ ಷಿಕಾಗೋವಿನಲ್ಲಿ ನಡೆದ ಒಂದು ಸಾಮೂಹಿಕ ವಿಚಾರಣೆಯಲ್ಲಿ ಸುಮಾರು 100 ಮಂದಿ ವಿಶ್ವಕೈಗಾರಿಕಾ ಕಾರ್ಮಿಕ ಸಂಘ ಮುಂದಾಳುಗಳು ಅತ್ಯುಗ್ರ ಶಿಕ್ಷೆಗೆ ಒಳಗಾದರು. ಬಹು ಸಂಖ್ಯಾತ ಅಕುಶಲ ಕಾರ್ಮಿಕರು ಬೇರೆ ದೇಶಗಳಿಂದ ವಲಸೆ ಬಂದು ಈ ಕೂಟದ ಸದಸ್ಯರಾಗುವುದನ್ನು 1920ರ ವಲಸೆ ನಿರ್ಬಂಧ ಕಾಯಿದೆ ತಪ್ಪಿಸಿದ್ದು ಈ ಕಾರ್ಮಿಕ ಮಹಾಸಂಘದ ವರ್ಚಸ್ಸನ್ನು ಕಡಿಮೆ ಮಾಡಲು ಮತ್ತೊಂದು ಕಾರಣವಾಯಿತು. 1920ರ ಕೊನೆಯ ವೇಳೆಗೆ ಈ ಸಂಘ ತನ್ನ ವರ್ಚಸ್ಸನ್ನು ಸಂಪೂರ್ಣವಾಗಿ ಕಳೆದುಕೊಂಡಿತು. 1949ರಲ್ಲಿ ಈ ಸಂಸ್ಥೆಗೆ 1,550 ಕಾರ್ಮಿಕರು ಮಾತ್ರ ಸದಸ್ಯರಾಗಿದ್ದರೂ ಇದು ಸರ್ಕಾರ ರಚಿಸಿದ್ದ ವಿಧ್ವಂಸಕರ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿತ್ತು. 

ವಿಶ್ವದ ಕೈಗಾರಿಕಾ ಕಾರ್ಮಿಕರ ಮಹಾಸಂಘಕ್ಕೆ ಸೇರಿದ ಸ್ಥಳೀಯ ಕಾರ್ಮಿಕ ಸಂಘಗಳು ಸಾಮಾನ್ಯವಾಗಿ ಪ್ರತಿಯೊಂದು ಕೈಗಾರಿಕಾ ದೇಶದಲ್ಲೂ ಅಸ್ತಿತ್ವದಲ್ಲಿದ್ದುವು. ಇಂಗ್ಲೆಂಡಿನಲ್ಲಿ ಲಂಡನ್, ಲಿವರ್‍ಪೂಲ್ ಮತ್ತು ಗ್ಲಾಸ್ಗೋ ಪಟ್ಟಣಗಳಲ್ಲಿ ಇವು ಕಾಣಿಸಿಕೊಂಡಿದ್ದುವು. ಸಂಯುಕ್ತ ಸಂಸ್ಥಾನವಲ್ಲದೆ ಇತರ ದೇಶಗಳ ಪೈಕಿ ಆಸ್ಟ್ರೇಲಿಯದಲ್ಲಿ ಮಾತ್ರ ಇವು ಪ್ರಾಮುಖ್ಯ ಪಡೆದಿದ್ದುವು. ಅಲ್ಲೂ 1917-18ರಲ್ಲಿ ಅವನತಿ ಹೊಂದಿದುವು. 		  					(ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ